ಗುರುವಾರ, ಡಿಸೆಂಬರ್ 25, 2008

ಮಾಯಾಮೃಗ

ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ?
ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ?

ಬಲು ದೂರದಿ ಹೊಳೆಯುತ್ತಿದೆ ಬಾನೀಲಿಯ ಕೆಳಗೆ
ಬಲು ದೂರದಿ ಹೊಳೆಯುತ್ತಿದೆ ಬಾನೀಲಿಯ ಕೆಳಗೆ

ಹೊಳೆಯುತ್ತಿವೆ ಕಣ್ಣಂದು ಬಿಳಿ ವಜ್ರದ ಹಾಗೆ
ಹೊಳೆಯುತ್ತಿವೆ ಕಣ್ಣಂದು ಬಿಳಿ ವಜ್ರದ ಹಾಗೆ

ಶರವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ?
ಶರವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ?
ಶರವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ?

ಇದು ನಮ್ಮ ಕನ್ನಡ ಚಿತ್ರ ನಿರ್ದೇಶಕ ಟಿ. ಎನ್. ಸೀತಾರಾಂ ರವರ "ಮಾಯಾಮೃಗ" ಧಾರವಾಹಿಯ ಶೀರ್ಷಿಕೆ ಗೀತೆ. ನಮ್ಮ ಸಧ್ಯದ ಪರಿಸ್ಥಿತಿಗೆ ಬಹಳ ಹೊಂದಿಕೆಯಾಗುವಂಥ ಗೀತೆ.

ನನ್ನ ಹಿಂದಿನ ಲೇಖನದಲ್ಲಿ ಒಂದು BUG ಬಗ್ಗೆ ಬರೆದಿದ್ದೆ. ಇದೂ ಸಹ ಅದರ ಬಗ್ಗೆನೇ ಇರೋ ಲೇಖನ.

BUG ಸಿಕ್ತು ಅಂಥ ಖುಷಿಯಲ್ಲಿದ್ದ ನಮಗೆ ಆಮೇಲೆ ಗೊತ್ತಾಗಿದ್ದು ಅದು "ಮಾಯಾಮೃಗ" ಅಂಥ. ಇನ್ನೇನು ಸಿಕ್ಕೇ ಬಿಡ್ತು ಅನ್ನುವಷ್ಟರಲ್ಲಿ ತಪ್ಪಿಸಿಕೊಂಡು ಹೋಗುವಂಥ BUG. ಎರಡು ಮೂರು ಗಂಟೆ ನಮ್ಮ Program ಓಡುತ್ತಿತ್ತು. ಆಮೇಲೆ Crash ಆಗ್ತಿತ್ತು. ಎರಡು ಗಂಟೆ ಮೇಲೆ ಓಡುತ್ತಿದ್ದ ಹಾಗೆ ನಮ್ಮ ಕಣ್ಣು, ಕಿವಿ ಎರಡೂ ಅಗಲ ಆಗುತ್ತಿದ್ದವು. Sudden ಆಗಿ Crash ಆಗ್ತಿತ್ತು. ಆಗ ನನಗೆ ಮಾಯಾಮೃಗದ ಕಥೆ ನೆನಪು ಆಗ್ತಿತ್ತು.

ನಾವು ಐದು ಜನ ಅದನ್ನು ಹಿಡಿಯೊಕ್ಕೆ ಹೊಂಟಿದ್ದು. ಅದರಲ್ಲಿ ಇಬ್ಬರಂತೂ ಅರ್ಧದಲ್ಲೇ ಸುಸ್ತಾದರು. ಕೊನೆಗೆ ಮೂವರೇ ಹುಡುಕೊಕ್ಕೆ ಶುರು ಮಾಡಿದಿವಿ. ಅದೂ Project ಮುಗಿಯುವ time ಬೇರೆ ಬಂತು ಆಗಲೇ. ಎಲ್ಲರ Ticket ಸಹ Book ಆಗಿದ್ದವು ಭಾರತಕ್ಕೆ ವಾಪಸ್ಸಾಗಲು. ಇನ್ನೂ ಕೂಡ Bug ಸಿಕ್ಕಿರಲಿಲ್ಲ. ರಜದಲ್ಲೂ ಕೂಡ ಕೆಲಸ ಮಾಡೊ ಪರಿಸ್ಥಿತಿ ನಮ್ಮದು. ಅದೂ Overtime. ಎಲ್ಲರೂ ರಜದಲ್ಲಿ Enjoy ಮಾಡ್ತಾ ಇದ್ದರೆ ನಾವು ಆಫೀಸ್‌ನಲ್ಲಿ ಕುಂತುಕೊಂಡು ತಲೆ ಕೆಡಿಸಿಕೊಳ್ತಾ ಇದ್ವಿ.

ನಮ್ಮ ಮ್ಯಾನೇಜರ್ ಪ್ರತಿ ದಿವಸ Status ಕೇಳೊಕ್ಕೆ ಶುರು ಬೇರೆ ಮಾಡಿದ್ದರು. ಏನ್ ಹೇಳೋದು ಅವರಿಗೆ. "ದೂರದ ಬೆಟ್ಟ ನುಣ್ಣಗೆ" ಅಂತಾರಲ್ಲ ಹಾಂಗೆ. ನಮ್ಮ ಮ್ಯಾನೇಜರ್ ಇರೋದು ಭಾರತದಲ್ಲಿ, ನಾವು ಕೊರಿಯಾದಲ್ಲಿ. ಅವರಿಗೆ ನಮ್ಮ ಸಮಸ್ಯೆ ನುಣ್ಣಗೆ ಕಾಣ್ತಾ ಇದೆ. ಇಲ್ಲಿರೋ ಸಮಸ್ಯೆ ಅವರಿಗೆ ಅರ್ಥ ಆದರೂ ಅವರು ಏನು ಮಾಡಕ್ಕಾಗದ ಪರಿಸ್ಥಿತಿ. ಅವರನ್ನು ನಾವು ಮ್ಯಾನೇಜ್ ಮಾಡೊ ಪರಿಸ್ಥಿತಿ ಬಂತು.

ಮಾಯಾಮೃಗದ ಕಥೆಯಲ್ಲಿ ಕೊನೆಗೆ "ಮಾಯಾಮೃಗ" ಸಾಯುತ್ತೆ. ನಮ್ಮ Projectನಲ್ಲೂ ಅದೇ ಆಗಬೇಕು. ನಾವು BUGನ ಸಾಯಿಸಬೇಕು. ಏನು ಮಾಡ್ತೀವೋ ಗೊತ್ತಿಲ್ಲ. ಆ ದೇವರೇ ಬಲ್ಲ.

ಗುರುವಾರ, ಡಿಸೆಂಬರ್ 18, 2008

ಕಣ್ಣಿಗೆ ಕಾಣದ ನಾಟಕಕಾರ

ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ.... Sorry, ನಿನಗೇ ನಮ್ಮ ನಮಸ್ಕಾರ.

ಇದು ಒಂದು ಕನ್ನಡ ಚಿತ್ರಗೀತೆ ಪಲ್ಲವಿಯ ಪದಗಳು. ಇತ್ತೀಚೆಗೆ ಈ ಹಾಡಿನ ತುಣುಕು ಬಹಳ ನೆನೆಪು ಆಗ್ತಿತ್ತು. ಯಾಕೆಂದರೆ ಮುಂದೆ ಓದಿ ಗೊತ್ತಾಗುತ್ತೆ.

ನಾನು ನನ್ನ ಕೆಲಸದ ನಿಮಿತ್ತ ದಕ್ಷಿಣ ಕೊರಿಯಾದ ಸುವಾನ್ ನಗರಕ್ಕೆ ಸೆಪ್ಟೆಂಬರ್‌ನಲ್ಲಿ ನನ್ನ ತಂಡದ ಜೊತೆ ಬಂದಿದ್ದೆ. ಸುಮಾರು ಎಂಟು ತಿಂಗಳು ಬೆಂಗಳೂರಿನಲ್ಲೆ ಕೆಲಸ ಮಾಡಿ ಕೊರಿಯಾಗೆ ಬಂದಿದ್ವಿ. ಮೊದಲ ಮೂರು ತಿಂಗಳು ಚೆನ್ನಾಗಿ ಕೆಲಸ ಮಾಡಿ, ನಮ್ಮ Customerನಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿದ್ವಿ.

ಆಮೇಲೆ ಒಂದು ಸಮಸ್ಯೆ ಎದುರಾಯಿತು ನೋಡಿ. ನಮ್ಮ ಭಾಷೆಯಲ್ಲಿ ಅದನ್ನು BUG ಅಂತೀವಿ. ನಮ್ಮನ್ನು ಕಾಡಿದ್ದು ಅಂತಿಂಥ BUG ಅಲ್ಲ. ಅದು ಯಾವ ಸಂದರ್ಭದಲ್ಲಿ ಬರುತ್ತೆ ಅಂಥ ಹೇಳೊದೆ ಕಷ್ಟ ಆಗಿತ್ತು. ಇಂಥ ಸಂದರ್ಭದಲ್ಲೇ ಬರುತ್ತೆ ಅಂಥ ಗೊತ್ತಾದರೆ, ಕಾದು ಬಿಟ್ಟು ಆ BUGನ ಹಿಡಿದು ಹಾಕಬಹುದಾಗಿತ್ತು. ಎಲ್ಲರೂ ತಲೆ ಕೆಡಿಸಿಕೊಂಡು ಕುಂತುಕೊಂಡಿವಿ BUG ಹಿಡಿಯೊಕ್ಕೆ.

ಛಲ ಬಿಡದ ತ್ರಿವಿಕ್ರಮನಂತೆ BUGನ ಹುಡುಕಾಡಿದ್ವಿ ಎಲ್ಲರೂ ಕೂಡಿಕೊಂಡು. ಕೊನೆಗೂ ಒಂದು ನಿರ್ಧಾರಕ್ಕೆ ಬಂದು BUG ಇಲ್ಲೇ ಇದೆ ಅಂಥ ನಮ್ಮ Customerಗೆ ಹೇಳಿದ್ವಿ. ಆದರೂ ಅವ ಒಪ್ಪಂಗಿಲ್ಲ. ಏನ್ ಮಾಡೊದು? ಆಗ ನನಗೆ ಅನ್ನಿಸ್ತಿತ್ತು "ಕಣ್ಣಿಗೆ ಕಾಣದ ನಾಟಕಕಾರ" ಆ BUG ಆದ್ರೆ, "ಕಣ್ಣಿಗೆ ಕಾಣುವ ನಾಟಕಕಾರ" ನಮ್ಮ Customer ಅಂಥ.

ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನಮ್ಮ ನಮಸ್ಕಾರ

ಕಣ್ಣಿಗೆ ಕಾಣುವ ನಾಟಕಕಾರ
ನಿನಗೂ ನಮ್ಮ ನಮಸ್ಕಾರ

ಕೊನೆಗೂ BUG ಸಿಕ್ತು. ಸಮಧಾನದ ನಿಟ್ಟುಸಿರು ಬಿಟ್ಟಿವಿ.

ಶುಕ್ರವಾರ, ನವೆಂಬರ್ 28, 2008

ಎಲ್ಲೋ ಹುಡುಕಿದೆ ಇಲ್ಲದ ದೇವರ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಂಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲ್ಲಿ

ನಮ್ಮ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಬರೆದ ಈ ಕವನ ನನ್ನ ಅಚ್ಹುಮೆಚ್ಹಿನ ಗೀತೆ. ಎಷ್ಟು ಸರಳವಾಗಿ, ಎಷ್ಟೊಂದು ಅರ್ಥಗರ್ಭಿತವಾಗಿ ಬರೆದಿದ್ದಾರೆ. ಈ ಗೀತೆಗೆ ಸಿ. ಅಶ್ವಥ್‌ರವರು ಸಂಗೀತ ಸಂಯೋಜನೆ ನೀಡಿ ಭಾವಪೂರ್ಣವಾಗಿ ಹಾಡಿದ್ದಾರೆ.

ಈ ಸರಳವಾದ ಗೀತೆಯನ್ನ ಎಲ್ಲರೂ ಅರ್ಥ ಮಾಡಿಕೊಂಡರೆ ಎಷ್ಟೊಂದು ಸುಂದರವಾಗಿರುತ್ತೆ ಅಲ್ವಾ ನಮ್ಮ ಜೀವನ!!!

ಶುಕ್ರವಾರ, ನವೆಂಬರ್ 7, 2008

ಎದೆ ಝಲ್ಲೆನಿಸಿದ ಆ ಕ್ಷಣ

ಇದು ನಡೆದಿದ್ದು ಶಿವಮೊಗ್ಗದಲ್ಲಿ.ನಾನು PUC ಓದುತ್ತಿದ್ದೆ ಆಗ. ನಮ್ಮ ದೊಡ್ಡಮ್ಮರ ಜೊತೆಯಲ್ಲಿ ಇದ್ದೆ ನಾನು.

ನಾವು ಇದ್ದಿದ್ದು ಬಾಡಿಗೆ ಮನೆಯಲ್ಲಿ. ಮನೆಯ ಮಾಲೀಕರು ಯಾವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಅವರ ಮನೆಯ ಕೀಲಿ ನಮ್ಮ ಹತ್ತಿರ ಕೊಟ್ಟಿದ್ದರು. ನಾನು ದಿವಸ ರಾತ್ರಿ ಮಲಗೋ ಮುಂಚೆ ಅವರ ಮನೆಯ ಒಂದು ದೀಪ ಹಾಕಿ ಬರುತ್ತಿದ್ದೆ. ಬೆಳಿಗ್ಗೆ ಎದ್ದು ಅದನ್ನು ಆರಿಸಿ ಬರುತ್ತಿದ್ದೆ. ಪ್ರತಿ ಮುಂಜಾನೆ ದೀಪ ಆರಿಸಿ ಬರೋ ಮುಂಚೆ ಒಳಗೆಲ್ಲ ಒಂದು ಸಾರಿ ಹೋಗಿ ನೋಡಿಕೊಂಡು ಬರುತ್ತಿದ್ದೆ. ಇದು ಪ್ರತಿನಿತ್ಯ ನಡೀತಿತ್ತು.

ಒಂದು ದಿನ ಮುಂಜಾನೆ ಬೆಳಿಗ್ಗೆ ಎಚ್ಚರ ಆಗೊದು ತಡ ಆಯಿತು. ಅವಸರದಲ್ಲಿ ಹಾಸಿಗೆಯಿಂದ ಎದ್ದೋನೆ ಮುಖ ಕೂಡ ತೊಳೆಯದೆ ಅವರ ಮನೆಯ ಕೀಲಿ ತಗೊಂಡು ಹೋದೆ. ಇನ್ನು ನಿದ್ದೆ ಮಂಪರು ಹಾಗೆ ಇತ್ತು. ಹೋಗಿ ಮನೆಯ ಕೀಲಿ ತೆಗೆದೆ. ಪ್ರತಿದಿವಸದಂತೆ ಒಳಗೆಲ್ಲ ಹೋದೆ. ಸಾಮಾನ್ಯವಾಗಿ ನಾನು ರೂಮ್ ಒಳಗೆ ಹೋಗ್ತಿರಲಿಲ್ಲ. ಆ ದಿನ ಅಡುಗೆ ಮನೆ ಪಕ್ಕದಲ್ಲಿರುವ ರೂಮ್ ಒಳಗೆ ಹೋದೆ. ಸ್ವಲ್ಪ ಕತ್ತಲು ಇತ್ತು ಅಲ್ಲಿ. ಒಳಗೆ ಕಾಲಿಟ್ಟು ತಕ್ಷಣ ನನ್ನ ಬಲಕ್ಕೆ ತಿರುಗಿದೆ. ತಕ್ಷಣ ಎದೆ ದಸಕ್ಕಂತು. ನೋಡ್ತೀನಿ ನನ್ನಷ್ಟೆ ಎತ್ತರ ಇರೊ ಒಬ್ಬ ಮನುಷ್ಯ ನಿಂತುಕೊಂಡಿದ್ದಾನೆ. ನೂರಾರು ಯೋಚನೆಗಳು ಸುಳಿದಾಡಿದವು. ಇವ ಒಳಗೆ ಹೆಂಗೆ ಬಂದ. ನಾನೆ ರಾತ್ರಿ ಎಲ್ಲ ನೋಡಿಕೊಂಡು ಕೀಲಿ ಹಾಕ್ಕೊಂಡು ಬಂದಿದ್ದೆ ಅಂತ. ಹೊರಗೆ ಓಡಿ ಹೋಗಿ ಬಿಡೋಣ ಅನ್ಣಿಸಿತು. ಆದರೂ ಓಡಲಿಲ್ಲ. ಧೈರ್ಯ ತಗೊಂಡು ಅಲ್ಲೇ ನಿಂತೆ.

"ಏ ಹೆಂಗಲೇ ಬಂದೆ ಒಳಗೆ", ಎಂದು ಜೋರಾಗಿ ಅವನಿಗೆ ಕೇಳಿದೆ.

ಅವ ಮಾತಾಡಲಿಲ್ಲ.

ಹೊರಗೆ ಹೋಗಿ ಯಾರನ್ನಾದರು ಕರೆಯೋಣ ಅಂದರೆ ಮನಸ್ಸು ಒಪ್ಪಲಿಲ್ಲ. ಅವ ತಪ್ಪಿಸಿಕೊಂಡು ಹೋಗಿಬಿಟ್ಟರೇ?

ಮತ್ತೆ ಜೋರು ದನಿಯಲ್ಲೇ ಕೇಳಿದೆ "ಮಾತಾಡಲೇ".

ಮತ್ತೆ ಮೌನ.

ಯಾರನ್ನಾದರು ಕರೆಯೋಣ ಅಂತ ಹೊರಗೆ ಹೋಗೊಕ್ಕೆ ಬಲಕ್ಕೆ ತಿರುಗಿದೆ. ಅವ ಕೂಡ ತಿರುಗಿದ. ಮತ್ತೆ ದಿಟ್ಟಿಸಿ ನೋಡಿದೆ ಅವನೂ ಕೂಡ ನನ್ನ ತರಹದ ಅಂಗಿ ಹಾಕ್ಕೊಂಡಿದಾನೆ.

ಕಣ್ಣು ಒರೆಸಿಕೊಂಡು ನೋಡ್ತೀನಿ,ನಂಬಕ್ಕೆ ಆಗ್ದೆ ಇರೊ ಒಂದೆರಡು ಕ್ಷಣಗಳು. ಎದುರಿಗೆ ಇರೋ ವ್ಯಕ್ತೀ ನಾನೇ. Oh my God!. ನನ್ನನ್ನು ನಾನೇ ಗುರುತು ಹಿಡಿಯಕ್ಕಾಗಲಿಲ್ಲ. ಯಾಕೆಂದರೆ ಅಲ್ಲಿ ಒಂದು ಕನ್ನಡಿ ಇತ್ತು. ಆ ಕನ್ನಡಿಯಲ್ಲಿ ಇರೋವ ನಾನೇ. ಆ ಕನ್ನಡಿ ಎತ್ತರವಾಗೇ ಇತ್ತು. ಯಾರಾದರು ತಕ್ಷಣಕ್ಕೆ ಒಳಗೆ ಬಂದು ನೋಡಿದರೆ, ಅದು ಬಾಗಿಲು ತರಹ ಕಾಣುತ್ತಿತ್ತು. ನಾನು ಇನ್ನು ನಿದ್ದೆ ಮಂಪರಿನಲ್ಲೇ ಒಳಗೆ ಬಂದಿದ್ದೆ, ಕತ್ತಲು ಬೇರೆ ಇತ್ತು. ನನಗೆ ಯಾರೋ ಬಾಗಿಲಲ್ಲಿ ನಿಂತುಕೊಂಡಿದ್ದಾರೆ ಅನ್ನಿಸಿತು. ಸುಮಾರು ಒಂದು ಅರ್ಧ ನಿಮಿಷದಲ್ಲಿ ಇದು ನಡೆದು ಹೋಗಿತ್ತು.

ನಮ್ಮ ಕಣ್ಣುಗಳನ್ನು ನಾವೇ ನಂಬಕ್ಕಾಗಲಿಲ್ಲ ಅಂತ ಹೇಳ್ತಾರಲ್ಲ, ಇದಕ್ಕೆ ಇರಬೇಕು.