ಶುಕ್ರವಾರ, ನವೆಂಬರ್ 7, 2008

ಎದೆ ಝಲ್ಲೆನಿಸಿದ ಆ ಕ್ಷಣ

ಇದು ನಡೆದಿದ್ದು ಶಿವಮೊಗ್ಗದಲ್ಲಿ.ನಾನು PUC ಓದುತ್ತಿದ್ದೆ ಆಗ. ನಮ್ಮ ದೊಡ್ಡಮ್ಮರ ಜೊತೆಯಲ್ಲಿ ಇದ್ದೆ ನಾನು.

ನಾವು ಇದ್ದಿದ್ದು ಬಾಡಿಗೆ ಮನೆಯಲ್ಲಿ. ಮನೆಯ ಮಾಲೀಕರು ಯಾವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಅವರ ಮನೆಯ ಕೀಲಿ ನಮ್ಮ ಹತ್ತಿರ ಕೊಟ್ಟಿದ್ದರು. ನಾನು ದಿವಸ ರಾತ್ರಿ ಮಲಗೋ ಮುಂಚೆ ಅವರ ಮನೆಯ ಒಂದು ದೀಪ ಹಾಕಿ ಬರುತ್ತಿದ್ದೆ. ಬೆಳಿಗ್ಗೆ ಎದ್ದು ಅದನ್ನು ಆರಿಸಿ ಬರುತ್ತಿದ್ದೆ. ಪ್ರತಿ ಮುಂಜಾನೆ ದೀಪ ಆರಿಸಿ ಬರೋ ಮುಂಚೆ ಒಳಗೆಲ್ಲ ಒಂದು ಸಾರಿ ಹೋಗಿ ನೋಡಿಕೊಂಡು ಬರುತ್ತಿದ್ದೆ. ಇದು ಪ್ರತಿನಿತ್ಯ ನಡೀತಿತ್ತು.

ಒಂದು ದಿನ ಮುಂಜಾನೆ ಬೆಳಿಗ್ಗೆ ಎಚ್ಚರ ಆಗೊದು ತಡ ಆಯಿತು. ಅವಸರದಲ್ಲಿ ಹಾಸಿಗೆಯಿಂದ ಎದ್ದೋನೆ ಮುಖ ಕೂಡ ತೊಳೆಯದೆ ಅವರ ಮನೆಯ ಕೀಲಿ ತಗೊಂಡು ಹೋದೆ. ಇನ್ನು ನಿದ್ದೆ ಮಂಪರು ಹಾಗೆ ಇತ್ತು. ಹೋಗಿ ಮನೆಯ ಕೀಲಿ ತೆಗೆದೆ. ಪ್ರತಿದಿವಸದಂತೆ ಒಳಗೆಲ್ಲ ಹೋದೆ. ಸಾಮಾನ್ಯವಾಗಿ ನಾನು ರೂಮ್ ಒಳಗೆ ಹೋಗ್ತಿರಲಿಲ್ಲ. ಆ ದಿನ ಅಡುಗೆ ಮನೆ ಪಕ್ಕದಲ್ಲಿರುವ ರೂಮ್ ಒಳಗೆ ಹೋದೆ. ಸ್ವಲ್ಪ ಕತ್ತಲು ಇತ್ತು ಅಲ್ಲಿ. ಒಳಗೆ ಕಾಲಿಟ್ಟು ತಕ್ಷಣ ನನ್ನ ಬಲಕ್ಕೆ ತಿರುಗಿದೆ. ತಕ್ಷಣ ಎದೆ ದಸಕ್ಕಂತು. ನೋಡ್ತೀನಿ ನನ್ನಷ್ಟೆ ಎತ್ತರ ಇರೊ ಒಬ್ಬ ಮನುಷ್ಯ ನಿಂತುಕೊಂಡಿದ್ದಾನೆ. ನೂರಾರು ಯೋಚನೆಗಳು ಸುಳಿದಾಡಿದವು. ಇವ ಒಳಗೆ ಹೆಂಗೆ ಬಂದ. ನಾನೆ ರಾತ್ರಿ ಎಲ್ಲ ನೋಡಿಕೊಂಡು ಕೀಲಿ ಹಾಕ್ಕೊಂಡು ಬಂದಿದ್ದೆ ಅಂತ. ಹೊರಗೆ ಓಡಿ ಹೋಗಿ ಬಿಡೋಣ ಅನ್ಣಿಸಿತು. ಆದರೂ ಓಡಲಿಲ್ಲ. ಧೈರ್ಯ ತಗೊಂಡು ಅಲ್ಲೇ ನಿಂತೆ.

"ಏ ಹೆಂಗಲೇ ಬಂದೆ ಒಳಗೆ", ಎಂದು ಜೋರಾಗಿ ಅವನಿಗೆ ಕೇಳಿದೆ.

ಅವ ಮಾತಾಡಲಿಲ್ಲ.

ಹೊರಗೆ ಹೋಗಿ ಯಾರನ್ನಾದರು ಕರೆಯೋಣ ಅಂದರೆ ಮನಸ್ಸು ಒಪ್ಪಲಿಲ್ಲ. ಅವ ತಪ್ಪಿಸಿಕೊಂಡು ಹೋಗಿಬಿಟ್ಟರೇ?

ಮತ್ತೆ ಜೋರು ದನಿಯಲ್ಲೇ ಕೇಳಿದೆ "ಮಾತಾಡಲೇ".

ಮತ್ತೆ ಮೌನ.

ಯಾರನ್ನಾದರು ಕರೆಯೋಣ ಅಂತ ಹೊರಗೆ ಹೋಗೊಕ್ಕೆ ಬಲಕ್ಕೆ ತಿರುಗಿದೆ. ಅವ ಕೂಡ ತಿರುಗಿದ. ಮತ್ತೆ ದಿಟ್ಟಿಸಿ ನೋಡಿದೆ ಅವನೂ ಕೂಡ ನನ್ನ ತರಹದ ಅಂಗಿ ಹಾಕ್ಕೊಂಡಿದಾನೆ.

ಕಣ್ಣು ಒರೆಸಿಕೊಂಡು ನೋಡ್ತೀನಿ,ನಂಬಕ್ಕೆ ಆಗ್ದೆ ಇರೊ ಒಂದೆರಡು ಕ್ಷಣಗಳು. ಎದುರಿಗೆ ಇರೋ ವ್ಯಕ್ತೀ ನಾನೇ. Oh my God!. ನನ್ನನ್ನು ನಾನೇ ಗುರುತು ಹಿಡಿಯಕ್ಕಾಗಲಿಲ್ಲ. ಯಾಕೆಂದರೆ ಅಲ್ಲಿ ಒಂದು ಕನ್ನಡಿ ಇತ್ತು. ಆ ಕನ್ನಡಿಯಲ್ಲಿ ಇರೋವ ನಾನೇ. ಆ ಕನ್ನಡಿ ಎತ್ತರವಾಗೇ ಇತ್ತು. ಯಾರಾದರು ತಕ್ಷಣಕ್ಕೆ ಒಳಗೆ ಬಂದು ನೋಡಿದರೆ, ಅದು ಬಾಗಿಲು ತರಹ ಕಾಣುತ್ತಿತ್ತು. ನಾನು ಇನ್ನು ನಿದ್ದೆ ಮಂಪರಿನಲ್ಲೇ ಒಳಗೆ ಬಂದಿದ್ದೆ, ಕತ್ತಲು ಬೇರೆ ಇತ್ತು. ನನಗೆ ಯಾರೋ ಬಾಗಿಲಲ್ಲಿ ನಿಂತುಕೊಂಡಿದ್ದಾರೆ ಅನ್ನಿಸಿತು. ಸುಮಾರು ಒಂದು ಅರ್ಧ ನಿಮಿಷದಲ್ಲಿ ಇದು ನಡೆದು ಹೋಗಿತ್ತು.

ನಮ್ಮ ಕಣ್ಣುಗಳನ್ನು ನಾವೇ ನಂಬಕ್ಕಾಗಲಿಲ್ಲ ಅಂತ ಹೇಳ್ತಾರಲ್ಲ, ಇದಕ್ಕೆ ಇರಬೇಕು.

2 ಕಾಮೆಂಟ್‌ಗಳು:

ವಿಜಯ್ ಶೀಲವಂತರ ಹೇಳಿದರು...

ಹಾ ಹಾ ಹಾ....ತುಂಬ ತಮಾಷೆ ಅನುಭವ...ಚೆನ್ನಾಗಿ ಲೇಖನದ ಮುಖಾಂತರ ತಿಳಿಸಿದೀರಾ.... :)

ದೀಪಕ ಹೇಳಿದರು...

ಮಿತ್ರೇಶ್,

ನಿಮ್ಮ ಲೇಖನ ಹಾಸ್ಯ ಚುಟುಕಾಗಿ ಸೊಗಸಾಗಿದೆ. ನಮ್ಮ ಜೀವನದಲ್ಲಿ ನಡೆಯುವ ಎಷ್ಟೋ ಘಟನೆಗಳು ಎಷ್ಟು ಹಾಸ್ಯಮಯವಾಗಿರುತ್ತದೆ೦ಬುದಕ್ಕೆ ನಿಮ್ಮೀ ಲೇಖನವೇ ಸಾಕ್ಷಿ.
ನಿಮ್ಮ ಲೇಖನಗಳು ಹೀಗೆಯೇ ಪ್ರಕಟವಾಗಲಿ ಎ೦ದು ಆಶಿಸುತ್ತೇನೆ.

ಇ೦ತಿ,

ದೀಪಕ